ಉಕ್ಕು -  ಕಬ್ಬಿಣ ಮತ್ತು ಶೇ. 2ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಇವೆರಡು ಧಾತುಗಳ ಸಂಯೋಜನೆಯಿಂದ ದೊರೆಯುವ ಮಿಶ್ರಲೋಹ (ಸ್ಟೀಲ್). ಮ್ಯಾಂಗನೀಸ್, ಸಿಲಿಕಾನ್, ರಂಜಕ ಮತ್ತ ಗಂಧಕ ಇವು ವಿವಿಧ ಪ್ರಮಾಣಗಳಲ್ಲಿ ಉಕ್ಕಿನಲ್ಲಿ ಇರಬಹುದಾದ ಇತರ ಧಾತುಗಳು. ಈ ತರದ ಉಕ್ಕುಗಳ ಒಟ್ಟು ಹೆಸರು ಸರಳ ಇಂಗಾಲ ಉಕ್ಕುಗಳು ಅಥವಾ ಅಲೋಹಮಿಶ್ರ ಉಕ್ಕುಗಳು (ಅನ್ಅಲಾಯ್ಡ್‌ ಸ್ಟೀಲ್ಸ್‌), ಲೋಹಮಿಶ್ರ ಉಕ್ಕುಗಳಲ್ಲಿ (ಅಲಾಯ್ಡ್‌ ಸ್ಟೀಲ್ಸ್‌) ಇಂಗಾಲ ಪ್ರಮಾಣ ಕಡಿಮೆಯಾಗಿದ್ದು ಮೇಲೆ ಹೇಳಿರುವ ಲೋಹ ಧಾತುಗಳು ಅಲ್ಲದೆ ನಿಕ್ಕಲ್, ಕ್ರೋಮಿಯಂ, ಮಲಿಬ್ಡನಂ, ಟಂಗ್ಸ್ಟನ್ ಮತ್ತು ವೆನೇಡಿಯಂ ಲೋಹಧಾತುಗಳು ಸಹ ಇರುತ್ತವೆ.
ಕೈಗಾರಿಕೆಗಳಲ್ಲಿ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಬಳಸುವ ಕಬ್ಬಿಣವನ್ನು ಮೂರು ವಿಧವಾಗಿ ವಿಂಗಡಿಸಬಹುದು. ಮೊದಲನೆಯದು ಎರಕದ ಕಬ್ಬಿಣ ಅಥವಾ ತಾಂಡವಾಳ (ಕ್ಯಾಸ್ಟ್‌ ಐರನ್, ಪಿಗ್ ಐರನ್ ಎಂದೂ ಕರೆಯುವುದಿದೆ). ಇದರಲ್ಲಿ ಇಂಗಾಲಾಂಶ 3%-4% ಇದ್ದು ಗಣನೀಯ ಪ್ರಮಾಣದಲ್ಲಿ ರಂಜಕ, ಸಿಲಿಕಾನ್ ಇತ್ಯಾದಿ ಅಪದ್ರವ್ಯಗಳಿವೆ. ತಾಂಡವಾಳದ ಕರಗುವ ಉಷ್ಣತೆ ಶುದ್ಧ ಕಬ್ಬಿಣದ ಕರಗುವ ಉಷ್ಣತೆಗಿಂತ ಕಡಿಮೆ (ಶುದ್ಧ ಕಬ್ಬಿಣದ ಕ.ಉ. 1.530 ಡಿಗ್ರಿ  ಸೆ; ತಾಂಡವಾಳದ ಕ.ಉ. 1.100 ಡಿಗ್ರಿ ಸೆ.) ಆದ್ದರಿಂದ ಕರಗಿದ ತಾಂಡವಾಳ ಎರಕ ಹೊಯ್ಯಲು ತಕ್ಕುದಾಗಿದೆ. ಆದರೆ ತಾಂಡವಾಳ ಗಡಸು (ಹಾರ್ಡ್) ಮತ್ತು ಪ್ಯೆಸು (ಬ್ರಿಟಲ್). ಹೀಗಾಗಿ ಇದನ್ನು ಬೆಸೆಯುವುದಾಗಲಿ ತಗಡಾಗಿ ತಟ್ಟುವುದಾಗಲಿ ಸಾಧ್ಯವಿಲ್ಲ. ಇದರಲ್ಲಿನ ಇಂಗಾಲಾಂಶ 0.1 % ಮಾತ್ರ. ಇದರ ಬಿಗಿತ (ಟೆನಾಬಿದುರಸಿಟಿ) ಹೆಚ್ಚು. ಆದರೆ ಇದು ಬಲು ಮೆದುವಾಗಿದ್ದು ಒತ್ತಡಕ್ಕೆ ಈಡಾದಾಗ ಬಗ್ಗಿಹೋಗುತ್ತದೆ; ತುಲನಾತ್ಮಕವಾಗಿ ಬಲುಬೇಗನೆ ಸವೆದುಹೋಗುತ್ತದೆ. ಆದ್ದರಿಂದ ಇದು ಕಟ್ಟಡಗಳ ನಿರ್ಮಾಣ, ಯಂತ್ರರಚನೆ ಮುಂತಾದವಲ್ಲಿ ಉಪಯೋಗಕ್ಕೆ ತಕ್ಕುದಲ್ಲ. ಮೂರನೆಯದು ಉಕ್ಕು (ಸ್ಟೀಲ್). ಇದರಲ್ಲಿ ಇಂಗಾಲಾಂಶ 0.1%-1.5% ರಷ್ಟಿರಬಹುದು. ಬೇರೆ ಧಾತುಗಳೂ ಆವಶ್ಯಕತೆಗೆ ಅನುಗುಣವಾಗಿ ಯುಕ್ತ ಪ್ರಮಾಣಗಳಲ್ಲಿ ಇರುತ್ತವೆ. 

ಉಕ್ಕಿನ ಬಿಗಿತ, ಗಡಸುತನ ಮತ್ತು ಸಾಮರ್ಥ್ಯಗಳು (ಸ್ಟ್ರೆಂನ್ತ್‌) ಅದರಲ್ಲಿರುವ ಇಂಗಾಲಾಂಶವನ್ನವಲಂಬಿಸಿವೆ. ಆದ್ದರಿಂದ ಯುಕ್ತ ಸಮಪ್ರಮಾಣದಲ್ಲಿ ಇಂಗಾಲವನ್ನು ಮಿಶ್ರಿಸುವುದರ ಮೂಲಕ ನಾವು ಬಯಸುವ ಬಿಗಿತ, ಗಡಸುತನ, ಸಾಮರ್ಥ್ಯಗಳಿರುವ ಉಕ್ಕಿನ ನಿರ್ಮಾಣ ತಾತ್ತ್ವಿಕವಾಗಿ ಸಾಧ್ಯ. ಅಲ್ಪ ಪ್ರಮಾಣದಲ್ಲಿ ಕ್ರೋಮಿಯಂ, ನಿಕ್ಕಲ್, ಟಂಗ್ಸ್ ಟನ್, ವೆನೇಡಿಯಂ ಇತ್ಯಾದಿ ಲೋಹಗಳನ್ನು ಮಿಶ್ರಿಸುವುದರಿಂದಲೂ ಉಕ್ಕಿನ ವಿವಿಧ ಗುಣಗಳನ್ನು ವರ್ಧಿಸಬಹುದು. ಇಂಥ ಸಂಸ್ಕರಣೆಗಳಿಂದ ಉಕ್ಕಿನ ರಾಸಾಯನಿಕ ನಿರೋಧಕತ್ವ ಮುಂತಾದ ಗುಣಗಳನ್ನು ವೃದ್ಧಿಸುವುದು ಸಾಧ್ಯವಿದೆ. ಇಷ್ಟು ಮಾತ್ರವಲ್ಲ-ಉಕ್ಕನ್ನು ಹದಮಾಡಿ ಅದರ ಗುಣಗಳಲ್ಲಿ ವಿಶೇಷ ರೀತಿಯ ವ್ಯತ್ಯಾಸವನ್ನು ಉಂಟುಮಾಡ ಬಹುದು. ಹೀಗೆ ವಿವಿಧ ರೀತಿಗಳಲ್ಲಿ ಉಕ್ಕಿನ ಗುಣಗಳನ್ನು ನಿಯಂತ್ರಿಸಬಹುದಾದ್ದರಿಂದ ಅದು ನಮ್ಮ ಬಳಕೆಯ ಲೋಹ ಪದಾರ್ಥಗಳ ಪೈಕಿ ಅಗ್ರಸ್ಥಾನ ಪಡೆದಿದೆ. ದಿನಂಪ್ರತಿ ಉಪಯೋಗಿಸುವ ವಿವಿಧ ಹತ್ಯಾರುಗಳು, ಉಪಕರಣಗಳು, ಯಂತ್ರಗಳು, ವಾಹನ ಭಾಗಗಳು, ಕಟ್ಟಡ ಪಂಜರಗಳು ಮೊದಲಾದುವುಗಳೆಲ್ಲ ಉಕ್ಕಿನಿಂದಲೇ ರಚಿತವಾದವು ಎನ್ನುವುದು ಸರ್ವವಿದಿತ. 
ಉಕ್ಕಿನ ತಯಾರಿಕೆ
ಹಿಂದಿನ ಕಾಲದಲ್ಲಿ ಕಲ್ಲಿನಿಂದ ಕಟ್ಟಿದ ಸಣ್ಣ ಕುಲುಮೆಗಳ ಒಳಗೆ ಕಬ್ಬಿಣದ ಅದಿರು ಮತ್ತು ಇದ್ದಲಿನ ಪುಡಿ ಇವುಗಳ ಮಿಶ್ರಣವನ್ನು ಇಟ್ಟು ಅದಕ್ಕೆ ಬೆಂಕಿಹಚ್ಚಿ ತಿದಿಯಿಂದ ಗಾಳಿ ಒತ್ತುತ್ತಿದ್ದರು. ತಿದಿ ಒತ್ತಲು ಜಾನುವಾರುಗಳನ್ನು ಉಪಯೋಗಿಸುತ್ತಿದ್ದುದೂ ಇತ್ತು. ಇಂಥ ಕುಲುಮೆಗಳಲ್ಲಿ ದ್ರವಕಬ್ಬಿಣ ದೊರೆಯುತ್ತಿರಲ್ಲಿಲ್ಲ. ಬದಲು 4ಹಿ-8" ದಪ್ಪದ ಸ್ಪಂಜಿನಂತೆ ಇರುವ ಕಬ್ಬಿಣದ ಕಾದ ತುಂಡೊಂದು ಸಿಕ್ಕುತ್ತಿತ್ತು. ಇದರಲ್ಲಿ ಕಿಟ್ಟವೂ ಹಾಸುಹೊಕ್ಕಾಗಿ ಬೆರೆತಿರುತ್ತಿತ್ತು. ಈ ತುಂಡನ್ನು ಸುತ್ತಿಗೆಯಿಂದ ಹೊಡೆದು ಕಿಟ್ಟವನ್ನು ಬೇರ್ಪಡಿಸಿ ತಮಗೆ ಬೇಕಾದ ಆಯುಧಗಳನ್ನು ತಯಾರಿಸುತ್ತಿದ್ದರು. ಆವಶ್ಯಕತೆ ಬೆಳೆದಂತೆ ಸಣ್ಣ ಕುಲುಮೆಗಳನ್ನೇ ದೊಡ್ಡದಾಗಿ ಕಟ್ಟತೊಡಗಿದರು. ಇವುಗಳಿಗೆ ಗಾಳಿ ಒದಗಿಸಲು ನೀರಿನಿಂದ ಓಡುವ ಚಕ್ರಗಳ ಬಳಕೆ ಜರ್ಮನಿಯಲ್ಲಿ ಆರಂಭವಾಯಿತು (15ನೆಯ ಶತಮಾನ). ಇದರಿಂದ ಕುಲುಮೆಯ ಒಳಗೆ ಅಧಿಕ ಉಷ್ಣತೆ ಉಂಟಾಗಿ ದ್ರವ ಕಬ್ಬಿಣವನ್ನು ಪಡೆಯುವುದು ಸಾಧ್ಯವಾಯಿತು. ಕುಲುಮೆಯ ಕೆಳಭಾಗದಲ್ಲಿ ರಂಧ್ರ ಕೊರೆದು ದ್ರವವನ್ನು ಹೊರಗೆ ತೆಗೆಯತೊಡಗಿದರು. ಜೊತೆಯಲ್ಲಿ ಕಿಟ್ಟವೂ ಬರುತ್ತಿತ್ತು. ಆದರೆ ಕಬ್ಬಿಣದ ಸಾಂದ್ರತೆಗಿಂತ ಕಿಟ್ಟದ ಸಾಂದ್ರತೆ ಬಲುಕಡಿಮೆಯಾದ್ದರಿಂದ ಅದು ಕಬ್ಬಿಣದ ಪಾಕದ ಮೇಲೆ ತೇಲುತ್ತಿತ್ತು. ಅದನ್ನು ಬೇರೆ ಕಡೆ ಹರಿಸಿ ಬೇರ್ಪಡಿಸುತ್ತಿದ್ದರು. ಈ ರೀತಿಯಾದ ಕುಲುಮೆಗಳಲ್ಲಿ ದೊರೆಯುತ್ತಿದ್ದ ಕಬ್ಬಿಣ ದಿನಕ್ಕೆ 100-220 ಪೌಂಡ್, ಇದರಲ್ಲಿ ಕಿಟ್ಟವಿಲ್ಲದಿದ್ದರೂ ಇಂಗಾಲದ ಪ್ರಮಾಣ ಬಹಳ ಜಾಸ್ತಿಯಾಗಿತ್ತು. ಆದ್ದರಿಂದ ಅದು ಸುತ್ತಿಗೆಯಿಂದ ಹೊಡೆದು ಮಾಡುವಷ್ಟು ಮೆದುವಾಗಿರಲಿಲ್ಲ. ಅದನ್ನು ಮೆದು ಮಾಡಲು ಸಣ್ಣ ಇದ್ದಲಿನ ಕುಲುಮೆಗಳಲ್ಲಿ ಹಾಕಿ ಹೆಚ್ಚಿನ ಗಾಳಿಯನ್ನು ಅದರ ಮೂಲಕ ಹಾಯಿಸುತ್ತಿದ್ದರು. ಗಾಳಿಯಲ್ಲಿರುವ ಆಕ್ಸಿಜನ್ನಿನಿಂದ ಆ ಕಬ್ಬಿಣದಲ್ಲಿರುವ ಹೆಚ್ಚಿನ ಇಂಗಾಲ ಮತ್ತು ಇತರ ವಸ್ತುಗಳು ಉತ್ಕರ್ಷಣ ಹೊಂದಿ ಕಬ್ಬಿಣ ಉಕ್ಕಾಗಿ ಪರಿಣಮಿಸುತ್ತಿತ್ತು. ಈ ವಿಧಾನ ಅನುಸರಿಸುತ್ತಿದ್ದ ಅಂದಿನ ಜನರಿಗೆ ಇದರ ಕಾರಣ ಮಾತ್ರ ತಿಳಿದಿರಲಿಲ್ಲ. ಹೀಗೆ ಮಾಡಿದರೆ ಮೆದುವಾಗುತ್ತದೆಂದು ಮಾತ್ರ ಅವರಿಗೆ ಗೊತ್ತಿತ್ತು.
ಇದೇ ರೀತಿ ಕಬ್ಬಿಣದ ಕುಲುಮೆಗಳು ದೊಡ್ಡವಾದಂತೆ ಮತ್ತು ಅದರೊಳಗಿನ ಉಷ್ಣತೆ ಹೆಚ್ಚಿದಂತೆ ಅವನ್ನು ತಡೆಯುವ ಕುಲುಮೆಯ ಕಟ್ಟಡಗಳನ್ನು ಕಟ್ಟಬೇಕಾಯಿತು. ಇದೇ ತಾಪನಿರೋಧಕ ಇಟ್ಟಿಗೆಗಳ (ರಿಫ್ರಾಕ್ಟರಿ ಬ್ರಿಕ್ಸ್‌) ತಯಾರಿಕೆಯ ಮೂಲ. ಕುಲುಮೆಗಳು ದೊಡ್ಡವಾದಂತೆ ಅವುಗಳಿಗೆ ಗಾಳಿಯನ್ನು ಒದಗಿಸಲು ದೊಡ್ಡ ದೊಡ್ಡ ಯಂತ್ರಗಳು ತಯಾರಾಗಬೇಕಾಯಿತು. ಊದುಕುಲುಮೆಯ (ಬ್ಲಾಸ್ಟ್‌ ಫರ್ನೇಸ್) ಇತಿಹಾಸ ಇಲ್ಲಿ ಆರಂಭವಾಯಿತು. ಇಂಥ ಕುಲುಮೆಗಳಿಗೆ ಹೆಚ್ಚು ಆವಶ್ಯಕತೆ ಏರತೊಡಗಿತು. ಕಾಡುಗಳು ಕಡಿಮೆಯಾಗಿದ್ದ ಪಾಶ್ಚಾತ್ಯ ದೇಶಗಳಲ್ಲಿ ಉದ್ಯಮಕ್ಕೆ ಬೇಕಾಗುವಷ್ಟು ಇದ್ದಲು ದೊರೆಯುತ್ತಿರಲಿಲ್ಲ. ಇದ್ದಲಿಗೆ ಬದಲು ಕಲ್ಲಿದ್ದಲ್ಲನ್ನೇ ಉಪಯೋಗಿಸುವ ಪ್ರಯತ್ನಗಳು (18ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ) ನಡೆದು ವಿಫಲವಾಗಿ ಅಮೇಲೆ ಕಲ್ಲಿದ್ದಲಿನಿಂದ ಮಾಡಿದ ಕೋಕನ್ನು ಯಶಸ್ವಿಯಾಗಿ ಉಪಯೋಗಿಸಲು ಆರಂಭವಾಗಿ ಇವತ್ತಿಗೂ ಅದೇ ಮುಖ್ಯ ಸಾಧನವಾಗಿ ಉಳಿದುಕೊಂಡಿದೆ. ಗಾಳಿಯನ್ನು ಒದಗಿಸಲು ಉಗಿಯಂತ್ರಗಳು ತಯಾರಾದುವು. ಹೀಗೆ ಸುಧಾರಣೆಗೊಂಡ ಕುಲುಮೆಗಳಿಂದ ದಿನವೊಂದಕ್ಕೆ 3 ಟನ್ನಿನಷ್ಟು ಕಬ್ಬಿಣ ಉತ್ಪಾದನೆಯಾಗುತ್ತಿತ್ತು. 1829ರಲ್ಲಿ ನೀಲ್ಸನ್ ಎಂಬಾತ ತಣ್ಣಗಿನ ಗಾಳಿಯನ್ನು ಕುಲುಮೆಗೆ ಊದುವುದರ ಬದಲಾಗಿ ಕಾಯಿಸಿದ ಗಾಳಿ ಹಾಯಿಸುವುದನ್ನು ಕಂಡುಹಿಡಿದ. ಇದರಿಂದ ಕುಲುಮೆಯ ಉತ್ಪಾದನಾ ಸಾಮಥರ್ಯ್‌ವನ್ನು ಹೆಚ್ಚು ಮಾಡಲು ಅನುಕೂಲವಾಯಿತು. ಇದೇ ಆಧಾರದ ಮೇಲೆ ರಚಿಸಿದ ದೊಡ್ಡ ದೊಡ್ಡ ಕುಲುಮೆಗಳು ಒಂದೊಂದು ಈಗ ದಿನವೊಂದಕ್ಕೆ 1,000-2,000 ಟನ್ನುಗಳಷ್ಟು ಉತ್ಪಾದಿಸುವ ಸಾಮಥರ್ಯ್‌ ಪಡೆದಿವೆ. ಕುಲುಮೆಯಿಂದ ದೊರೆತ ಕಬ್ಬಿಣವನ್ನೇ ಮೊದಮೊದಲು ಇದ್ದಲಿನ ಜೊತೆಯಲ್ಲಿ ಪುನಃ ಕಾಯಿಸಿ ಶುದ್ಧಿಗೊಳಿಸಿ ಉಕ್ಕನ್ನು ತಯಾರಿಸುತ್ತಿದ್ದರು. ಕ್ರಮೇಣ ಇಲ್ಲಿಯೂ ಇದ್ದಲಿಗೆ ಬದಲಾಗಿ ಕಲ್ಲಿದ್ದಲಿನ ಉಪಯೋಗ ಆರಂಭವಾಯಿತು. ಆದರೆ ಅದರಲ್ಲಿದ್ದ ಗಂಧಕದ ಸಂಪರ್ಕದಿಂದ ತಯಾರಾದ ಉಕ್ಕಿನ ದರ್ಜೆ ಪುರಾ ಕೆಳಗಿನಮಟ್ಟದ್ದಾಗಿತ್ತು. ಇದನ್ನು ತಪ್ಪಿಸಲು ಪ್ರಯತ್ನಗಳು ನಡೆದು 1784ರಲ್ಲಿ ಹೆನ್ರಿ ಕೋರ್ಟ್ ಎಂಬಾತ ಒಂದು ಶುದ್ಧೀಕರಣ ಕುಲುಮೆಯನ್ನು ಕಂಡುಹಿಡಿದ. ಇದರಲ್ಲಿ ಕಬ್ಬಿಣವನ್ನು ನೇರವಾಗಿ ಕಲ್ಲಿದ್ದಲಿನೊಡನೆ ಕಾಯಿಸುವುದರ ಬದಲು ಕಲ್ಲಿದ್ದಲಿನ ಉರಿ ಮಾತ್ರ ಕಬ್ಬಿಣಕ್ಕೆ ತಾಗುವಂತೆ ಮಾಡಲಾಗಿತ್ತು. ಉರಿಯ ಉತ್ಕರ್ಷಣ ಗುಣದಿಂದ ಕಬ್ಬಿಣದಲ್ಲಿರುವ ಇಂಗಾಲ ಉಚ್ಚಾಟನೆಯಾಗುತ್ತಿತ್ತು. ಈ ರಾಸಾಯನಿಕ ಕ್ರಿಯೆಯನ್ನು ಉದ್ದೀಪನಗೊಳಿಸಲು ಕಬ್ಬಿಣವನ್ನು ದೊಡ್ಡ ದೊಡ್ಡ ಕಬ್ಬಿಣದ ಕೋಲುಗಳ ಸಹಾಯದಿಂದ ಬುಡಮೇಲು ಮಾಡಿ ಕುಲುಕುತ್ತಿದ್ದರು. ಕೊನೆಯಲ್ಲಿ ಒಂದು ದೊಡ್ಡ ಉಕ್ಕಿನ ಉಂಡೆ (ಪಡಲ್ಡ್‌ ಐರನ್) ತಯಾರಾಗುತ್ತಿತ್ತು. ಇದನ್ನು ಸುತ್ತಿಗೆಯಿಂದ ಬಡಿದು ಕಿಟ್ಟವನ್ನು ಬೇರ್ಪಡಿಸಿಬೇಕಾದ ಪದಾರ್ಥಗಳನ್ನು ಮಾಡಿಕೊಳ್ಳುತ್ತಿದ್ದರು. ಹೀಗೆ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೋದ್ಯಮಕ್ಕೆ ಮೂಲಭೂತವಾದದ್ದು ಊದುಕುಲುಮೆ. ಇದನ್ನು ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯ ತಾಯಿ ಅಥವಾ ರಾಣಿ ಎಂಬುದಾಗಿ ಹೇಳುವ ಪದ್ಧತಿಯುಂಟು. ಅದಕ್ಕೆ ಸ್ತ್ರೀಲಿಂಗವನ್ನು ಬಳಸುವುದು ಅನ್ವರ್ಥಕವೆಂದು ಹೇಳಬಹುದು. ಸ್ತ್ರೀಯ ಮನಸ್ಸನ್ನು ತಿಳಿದುಕೊಳ್ಳುವುದು ಎಷ್ಟು ಕಠಿಣವೋ ಊದುಕುಲುಮೆಯ ಒಳಗಿನ ವಿದ್ಯಮಾನ ಮತ್ತು ರಾಸಾಯನಿಕ ಕ್ರಿಯೆಗಳನ್ನು ತಿಳಿದುಕೊಳ್ಳುವುದೂ ಅಷ್ಟೇ ಕಠಿಣ. ಇದು ನವೀನಯುಗದ ಅತ್ಯಾಧುನಿಕ ಯಂತ್ರೋಪಕರಣಗಳಿಂದಲೂ ಭೇದಿಸಲಾಗದ ಒಂದು ಒಗಟು.
ಆಧುನಿಕ ಊದುಕುಲುಮೆಯ ಎತ್ತರ ಸರಿಸುಮಾರು 70'-90'. ಇದರ ರಚನೆ ಉಕ್ಕಿನ ದಪ್ಪ ದಪ್ಪವಾದ ಹಲಗೆಗಳಿಂದ ಮತ್ತು ಕುಲುಮೆಯ ಉತ್ಪಾದನ ಪ್ರಮಾಣಕ್ಕೆ ಸರಿಯಾಗಿ ಉಚ್ಚತಾಪ ಇಟ್ಟಿಗೆಗಳ ಬಿಗಿಯಾದ ಅಳವಡಿಕೆಯಿಂದ, ಕಬ್ಬಿಣದ ಅದಿರು, ಕೋಕ್ ಮತ್ತು ಸುಣ್ಣಕಲ್ಲು ಇವನ್ನು ಆಧುನಿಕ ಯಂತ್ರೋಪಕರಣಗಳ ಸಹಾಯದಿಂದ ತೂಗಿ ಕುಲುಮೆಯೊಳಗೆ ಸುರಿಯಲಾಗುವುದು.
ಇದರಿಂದ ಕೆಳಗಿರುವ ಉಷ್ಣತಾಮಾನ ಹೆಚ್ಚುತ್ತ ಹೋಗುತ್ತದೆ. ಕೆಳಭಾಗದಲ್ಲಿ ಯಾವಾಗಲೂ ಹರಿಯುತ್ತಿರುವ ನೀರಿನಿಂದ ತಣ್ಣಗೆ ಮಾಡಲ್ಪಟ್ಟಿರುವ ತಾಮ್ರಮಯವಾದ ಟ್ಯುಯರ್ಸ್ ಎಂಬ ನಳಿಕೆಗಳ ಮೂಲಕ ಗಾಳಿಯನ್ನು ನಿಯಮಿತ ಒತ್ತಡದಲ್ಲಿ ಊದುತ್ತಾರೆ. ಗಾಳಿಯಲ್ಲಿರುವ ಆಮ್ಲಜನಕದಿಂದ ಕೋಕ್ ಉರಿದು ಅದರಲ್ಲಿರುವ ಇಂಗಾಲ ಕಬ್ಬಿಣದ ಅದಿರನ್ನು ಕಬ್ಬಿಣವನ್ನಾಗಿ ಅಪಕರ್ಷಿಸುತ್ತದೆ. ಅದಿರಿನಲ್ಲಿರುವ ಬೇರೆ ಕಿಟ್ಟ ಪದಾರ್ಥಗಳು ಸುಣ್ಣಕಲ್ಲು ಮತ್ತು ಕೋಕಿನಲ್ಲಿರುವ ಬೂದಿಯೊಡನೆ ಸೇರಿ ಕಿಟ್ಟವಾಗುತ್ತದೆ. ಗಾಳಿಯನ್ನು ಊದುವ ಭಾಗದಲ್ಲಿ ಉತ್ಪತ್ತಿಯಾಗುವ ಉಷ್ಣತಾಮಾನ ಬಹಳ ಹೆಚ್ಚು. ಕಬ್ಬಿಣ ಮತ್ತು ಕಿಟ್ಟ ಎರಡೂ ಕರಗಿ ಉಂಟಾದ ದ್ರವ ಇನ್ನೂ ಕೆಳಗಿನ ಭಾಗದಲ್ಲಿ ಶೇಖರವಾಗುತ್ತದೆ. ಇದನ್ನು ಉಚ್ಚತಾಪ ಇಟ್ಟಿಗೆಗಳಿಂದ ಕಟ್ಟಿದ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಒಯ್ದು ನೇರವಾಗಿ ಉಕ್ಕನ್ನು ತಯಾರಿಸುವಲ್ಲಿಗೆ ರವಾನಿಸುತ್ತಾರೆ; ಅಥವಾ ಅಚ್ಚು ಎರಕದ ಯಂತ್ರಕ್ಕೆ ತೆಗೆದುಕೊಂಡು ಹೋಗಿ ಅಚ್ಚುಗಳನ್ನಾಗಿ ಒತ್ತುತ್ತಾರೆ. ಗಾಳಿಯನ್ನು ಊದುವ ತಾಮ್ರದ ನಳಿಗೆಗಳು ಕುಲುಮೆಯ ಪರಿಮಾಣವನ್ನು ಅವಲಂಬಿಸಿ 6-18ರವರೆಗೂ ಇರುತ್ತದೆ. ಗಾಳಿಯ ಉಷ್ಣತಾಮಾನ ಈಗಿನ ದೊಡ್ಡ ಕುಲುಮೆಗಳಲ್ಲಿ 700-800ಲಿ ಸೆ.ವರೆಗೂ ಇದೆ. ಊದುಕುಲುಮೆಯಿಂದ ಬಂದ ಕಬ್ಬಿಣವನ್ನು ಅಚ್ಚುಗಳನ್ನಾಗಿ ಹೊಯ್ದು ಆಮೇಲೆ ಪುನಃ ಸಣ್ಣ ಸಣ್ಣ ಕ್ಯುಪೋಲ ಎಂಬ ಕುಲುಮೆಗಳಲ್ಲಿ ಕರಗಿಸಿ ತಾಂಡವಾಳವಾಗಿ ಮಾಡಿ ಹಲವು ವಿವಿಧ ಅಚ್ಚುಗಳಲ್ಲಿ ಸುರಿಯುತ್ತಾರೆ. ನಮ್ಮ ನಿತ್ಯೋಪಯೋಗದ ದೋಸೆಯ ಕಾವಲಿ, ಶಾಲೆಗಳಲ್ಲಿರುವ ಇಳಿಜಾರು ಮೇಜಿನ ಸ್ಟ್ಯಾಂಡುಗಳು, ಬೀದಿಯಲ್ಲಿ ಉರಿಯುವ ಆಲಂಕಾರಿಕ ದೀಪದ ಕಂಬಗಳು, ರೈಲುಕಂಬಿಗಳು ಕೆಳಗೆ ಹಾಕಿರುವ ಕಬ್ಬಿಣದ ಸ್ಲೀಪರುಗಳು, ಪಟ್ಟಣದಲ್ಲಿ ಕುಡಿಯುವ ನೀರನ್ನು ಸಾಗಿಸಲು ಉಪಯೋಗಿಸುವ ದೊಡ್ಡ ದೊಡ್ಡ ನಳಿಗೆಗಳು, ಅನೇಕ ಯಂತ್ರಗಳಿಗೆ ಬೇಕಾದ ಕರಡು ಸಾಮಾನುಗಳು (ರಫ್ ಕ್ಯಾಸ್ಟಿಂಗ್ಸ್‌) ಇವೆಲ್ಲವೂ ತಾಡವಾಳ ದಿಂದಲೇ ತಯಾರಾಗುತ್ತವೆ. ಇದನ್ನು ತಯಾರುಮಾಡುವ ಶಾಖೆಗೆ ಫೌಂಡ್ರಿ ಎಂದು ಹೆಸರು. 
ಊದುಕುಲುಮೆಯಿಂದ ದೊರೆತ ಕಬ್ಬಿಣ ಅದೇ ರೂಪದಲ್ಲಿ ಉಪಯೋಗಕ್ಕೆ ಅನರ್ಹವಾದ್ದರಿಂದ ಅದನ್ನು ಉಕ್ಕಾಗಿ ಮಾಡಲು ಪ್ರಯತ್ನಗಳು ನಡೆದುವು. ಇಲ್ಲಿ ಮುಖ್ಯ ಮಾರ್ಗಗಳು ಮೂರು: 1. ಬೆಸ್ಸಮರ್ ಪರಿವರ್ತಕಗಳು 2. ತೆರೆದ ಒಲೆಯ ವಿಧಾನ 3. ವಿದ್ಯುತ್ಕುಲುಮೆಗಳು.
ಬೆಸ್ಸೆಮರ್ ವಿಧಾನ: ಮೆದು ಉಕ್ಕಿನಿಂದ ಮಾಡಿದ ಅಂಡಾಕಾರದ ಬೆಸ್ಸಮರ್ ಪರಿವರ್ತಕ (ಕನ್ವರ್ಟರ್) ಎಂಬ ದೊಡ್ಡ ಗುಡಾಣ ಇಲ್ಲಿನ ಮುಖ್ಯ ಭಾಗ. ದ್ರವಕಬ್ಬಿಣವನ್ನು ಇದರೊಳಗೆ ಸುರಿಯಲು ಮತ್ತು ದ್ರವ ಉಕ್ಕನ್ನು ಹೊರ ತೆಗೆಯಲು ಅನುಕೂಲವಾಗು ವಂತೆ ತಿರುಗಣೆಗಳ ಸಹಾಯದಿಂದ ತಿರುಗಿಸಲು ಸಾಧ್ಯವಾಗುವ ರೀತಿಯಲ್ಲಿ ಇದನ್ನು ಒಂದು ನಿಲುವಿಗೆ ಜೋಡಿ ಸಿದೆ. ಕಬ್ಬಿಣದಲ್ಲಿರುವ ಅಪದ್ರವ್ಯಗ ಳೊಡನೆ ವರ್ತಿಸಿ ಧಾತುಮಲವನ್ನು (ಸ್ಲ್ಯಾಗ್) ಉಂಟುಮಾಡಲು ಪರಿವರ್ತ ಕದ ಒಳಪಾಶರ್ವ್‌ಕ್ಕೆ ಸಿಲಿಕದ (ಅಪದ್ರವ್ಯಗಳು ಪ್ರತ್ಯಾಮ್ಲೀಯವಾಗಿದ್ದರೆ) ಅಥವಾ ಮ್ಯಾಗ್ನಸೈಟಿನ (ಅಪದ್ರವ್ಯಗಳು ಆಮ್ಲೀಯವಾಗಿದ್ದರೆ) ಅಸ್ತರಿ ಕೊಟ್ಟಿರುವರು.
ಪ್ರಾರಂಭದಲ್ಲಿ 15-20 ಟನ್ನುಗಳಷ್ಟು ದ್ರವ ತಾಂಡವಾಳವನ್ನು ಬೆಸ್ಸೆಮರ್ ಪರಿವರ್ತಕಕ್ಕೆ ಸುರಿದು ಇದರ ಮೂಲಕ ಗಾಳಿಯನ್ನು ಸ್ವಲ್ಪ ಹೆಚ್ಚಿನ ಒತ್ತಡದಲ್ಲಿ (30 ಪಿ.ಎಸ್.ಐ.) ಯಂತ್ರಗಳ ಸಹಾಯದಿಂದ ಪರಿವರ್ತಕದ ತಳದಲ್ಲಿರುವ ರಂಧ್ರಗಳ ಮೂಲಕ ಹಾಯಿಸುವರು. ಪರಿಣಾಮವಾಗಿ ಲೋಹದ ಉಷ್ಣತೆ ಉನ್ನತ ಮಟ್ಟಕ್ಕೇರಿ ಅದರಲ್ಲಿರುವ ಇಂಗಾಲದ ಭಾಗ ಉರಿದುಹೋಗುವುದು. ಇತರ ಅಪದ್ರವ್ಯ ಉತ್ಕರ್ಷಿತವಾಗಿ ಅಸ್ತರಿಯ ವಸ್ತುವಿನೊಡನೆ ಸಂಯೋಗಗೊಂಡು ಧಾತುಮಯವಾಗಿ ಪರಿಣಮಿಸುವುವು. ಪರಿವರ್ತಕದಲ್ಲಿ ಉದ್ಬವಿಸುತ್ತ ಮತ್ತು ತಳಮಳಿಸುತ್ತ ಇರುವ ದ್ರವ ಹೊಂಬಣ್ಣ, ನೀಲಿಬಣ್ಣ, ಕೆಂಪುಬಣ್ಣ ಮೊದಲಾದ ವರ್ಣವೈವಿಧ್ಯದಿಂದ ಮನೋಹರವಾಗಿ ಕಾಣುವುದು. ಹತ್ತಿರದಲ್ಲಿಯೇ ಕಣ್ಣುಕುರುಡುಮಾಡುವ ಜ್ವಾಲೆಯ ಪ್ರಭೆಯಲ್ಲಿ ಕೆಲಸಗಾರರು ಗಾಳಿಯನ್ನು ಯಾವ ಕ್ಷಣದಲ್ಲಿ ನಿಲ್ಲಿಸಬೇಕೆಂದು ಎದುರು ನೋಡುತ್ತಿರುವರು. ಗಾಳಿ ಹಾಯಿಕೆ ಹೆಚ್ಚಾದರೂ ಕಡಿಮೆಯಾದರೂ ಉತ್ತಮ ಉಕ್ಕು ಉಂಟಾಗುವುದಿಲ್ಲ. ಜ್ವಾಲೆ ಶಮನವಾಗಲು ಆರಂಭವಾಗುತ್ತಲೇ ಯಾವ ಗುಣವುಳ್ಳ ಉಕ್ಕನ್ನು ಬಯಸುತ್ತೇವೋ ಅದಕ್ಕೆ ಅನುಗುಣವಾದಷ್ಟು ಇಂಗಾಲ ಮತ್ತು ಇತರ ಲೋಹಗಳ ಮಿಶ್ರಣವನ್ನು ಪರಿವರ್ತಕದೊಳಕ್ಕೆ ಹಾಕಿ ನಿಮಿಷಗಳ ತರುವಾಯ ಗಾಳಿಯನ್ನು ನಿಲ್ಲಿಸಬೇಕು. ಈ ಮಿಶ್ರಣ ಕಬ್ಬಿಣವನ್ನು ಉಕ್ಕಾಗಿ ಪರಿವರ್ತಿಸುವುದು. ಆಗ ಪರಿವರ್ತಕವನ್ನು ತಿರುಗಣೆಯ ಸಹಾಯದಿಂದ ತಿರುಗಿಸಿ ಕರಗಿದ ಉಕ್ಕನ್ನು ಸುರಿಯುವರು. ಇದು ಬೆಳ್ಳಿಯಂತೆ ಹೊಳೆಯುತ್ತಿರುತ್ತದೆ. ಇದನ್ನೇ ಆಯಾಕಾರದ ಗಟ್ಟಿಗಳಾಗಿ ಅಚ್ಚು ಹಾಕುವರು. ಇಂಥ ಉಕ್ಕಿನ ಗಟ್ಟಿಗಳನ್ನು ಹೊಗೆ ಬಂಡಿಯ ಕಂಬಿಗಳು ತೊಲೆಗಳು, ಚಕ್ರಗಳು, ನೀರು ಕುದಿಸುವ ಕೊಳವೆಗಳು ಇತ್ಯಾದಿ ಅನೇಕ ತರಹ ಕೈಗಾರಿಕೆಯ ಮತ್ತು ಮನೆಗೆಲಸದ ಸಾಮಾನುಗಳ ತಯಾರಿಕೆಯಲ್ಲಿ ಉಪಯೋಗಿಸುವರು. ಈ ವಿಧಾನದಲ್ಲಿ ರಾಸಾಯನಿಕ ಕ್ರಿಯೆಗಳ ಅಂತ್ಯವನ್ನು ನಿರ್ಣಯಿಸುವುದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಲಭಿಸಿದ ಉಕ್ಕು ಉಪಯೋಗಕ್ಕೆ ಬಾರದಾಗುತ್ತದೆ. ಆದ್ದರಿಂದ ಈ ವಿಧಾನ ಈಚೆಗೆ ಪ್ರಚಾರದಲ್ಲಿಲ್ಲ. ಎಲ್.ಡಿ., ಎಲ್.ಡಿ., ಎ.ಸಿ. ಮತ್ತು ಕಾಲ್ಡೋ ವಿಧಾನಗಳು ಬೆಸ್ಸೆಮರ್ ಪರಿವರ್ತಕದ ಈಚಿನ ಸುಧಾರಣೆಗಳು. 
ಸೀಮೆನ್-ಮಾರ್ಟಿನ್ ಅವರ ತೆರೆದ ಒಲೆಯ ಕುಲುಮೆ (ಓಪನ್ ಹಾರ್ತ್ ಫರ್ನೇಸ್): ಉಷ್ಣನಿರೋಧಕ ಇಟ್ಟಿಗೆಗಳಿಂದ ಭಾಂಡವನ್ನು ರಚಿಸುತ್ತಾರೆ: ಕಬ್ಬಿಣದಲ್ಲಿರುವ ಅಪದ್ರವ್ಯಗ ಳೊಡನೆ ವರ್ತಿಸಿ ಧಾತುಮಲ ಉಂಟುಮಾಡಲು ಇದಕ್ಕೂ ಸಿಲಿಕದ (ಪ್ರತ್ಯಾಮ್ಲೀಯ ಅಪದ್ರವ್ಯಗಳು ಹೆಚ್ಚಾಗಿದ್ದರೆ) ಅಸ್ತರಿ ಕೊಟ್ಟಿರುತ್ತಾರೆ. ತಾಂಡವಾಳವನ್ನು ಹೆಚ್ಚು ಆಳವಿಲ್ಲದ ದೊಡ್ಡ ಬಾಣಲೆಯ ಆಕಾರದ ಒಂದು ದೊಡ್ಡ ಭಾಂಡಕ್ಕೆ ಸುರಿಯುವರು. ತಾಂಡವಾಳದ ಮೇಲೆ ಸ್ವಲ್ಪ ಹೆಮಟೈಟಿನ ಪುಡಿಯನ್ನುದುರಿಸಿ ಜೊತೆಗೆ ಗಣನೀಯ ಪ್ರಮಾಣದಲ್ಲಿ ಕಳಪೆ ಉಕ್ಕನ್ನೂ (ಸ್ಕ್ರ್ಯಾಪ್ ಸ್ಟೀಲ್) ಹಾಕುವರು. ಅನಂತರ ಪ್ರೊಡ್ಯೂಸರ್ ಅನಿಲವೆಂಬ ದಹ್ಯಾನಿಲವನ್ನು ಅದು ಉರಿಯಲು ಅವಶ್ಯವಾದುದಕ್ಕಿಂತ ಹೆಚ್ಚಿನ ಪ್ರಮಾಣದ ಗಾಳಿಯೊಡನೆ ಒಲೆಯ ಒಂದು ಕಡೆಯಿಂದ ಹಾಯಿಸುವರು. 
ಇದು ದ್ರವ ಕಬ್ಬಿಣದ ಮೇಲೆ ಉರಿದು ಕಬ್ಬಿಣವನ್ನು ಹೆಚ್ಚಿನ ಉಷ್ಣತೆಗೆ ಏರಿಸುವುದು. ದಹನಜನ್ಯ ಅನಿಲಗಳು ಒಲೆಯ ಇನ್ನೊಂದು ಭಾಗದಿಂದ ಹೊರಸೂಸುವುವು, ಕಬ್ಬಿಣದಲ್ಲಿರುವ ಅಪದ್ರವ್ಯಗಳು ಭಾಗಶಃ ಹಿಮಟೈಟಿನಿಂದಲೂ ಉತ್ಕರ್ಷಿತಗೊಳ್ಳುತ್ತವೆ. ಇಂಗಾಲದ ಮಾನಾಕ್ಸೈಡ್ ಆಗಿ ಇಂಗಾಲ ಹೊರಸೂಸುವುದು. ಆಗ ದ್ರವಕಬ್ಬಿಣ ಕುದಿಯುತ್ತಿರುವಂತೆ ಭಾಸವಾಗುವುದು. ಉತ್ಕರ್ಷಿತವಾದ ಇತರ ಅಪದ್ರವ್ಯಗಳು, ಅಸ್ತರಿಯ ವಸ್ತುವಿನೊಡನೆ ವರ್ತಿಸಿ ಧಾತುಮಲವನ್ನುಂಟುಮಾಡುತ್ತವೆ. ಆಗಾಗ್ಗೆ ಒಲೆಯಿಂದ ಸ್ವಲ್ಪಭಾಗ ಕಬ್ಬಿಣವನ್ನು ಒಂದು ಸೌಟಿನಿಂದ ಈಚೆಗೆ ತೆಗೆದು ಅದರಲ್ಲಿರುವ ಇಂಗಾಲ ಮತ್ತು ಅಪದ್ರವ್ಯಗಳ ಪ್ರಮಾಣವನ್ನು ರಾಸಾಯನಿಕ ಪ್ರಯೋಗ ಶಾಲೆಯಲ್ಲಿ ವಿಶ್ಲೇಷಿಸಿ ನಿರ್ಣಯಿಸುತ್ತಾರೆ. ಇಂಗಾಲದ ಪ್ರಮಾಣ ಅವಶ್ಯಮಟ್ಟಕ್ಕೆ ಬಂದಾಗ ಉತ್ಕರ್ಷಣೆ ಮುಂದುವರಿಯದಿರಲು ಹಿಮಟೈಟ್ ಹಾಕುವುದನ್ನು ನಿಲ್ಲಿಸಿ ಅದರೊಳಗೆ ಅಪೇಕ್ಷಿತ ಉಕ್ಕಿನ ಗುಣಕ್ಕೆ ಅನುಸಾರವಾಗಿ ವಿಶೇಷ ಲೋಹಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹಾಕುವರು. ಕರಗಿದ ಉಕ್ಕನ್ನು ಕುಲುಮೆ ಯಿಂದ ಸುರಿದು (ಬೆಸ್ಸೆಮರ್ ವಿಧಾನದಲ್ಲಿ ವಿವರಿಸಿದಂತೆ) ಅದನ್ನು ಉಕ್ಕಿನ ಗಟ್ಟಿಗಳನ್ನಾಗಿ ಅಚ್ಚೊತ್ತುತ್ತಾರೆ. ಸೈಮನ್ಸ್‌ ಉಕ್ಕು ಎಂದೇ ಇದು ಇಂದು ಪ್ರಸಿದ್ಧವಾಗಿದೆ. ಮೋಟಾರುಬಂಡಿ, ವಿಮಾನ ಭಾಗಗಳು, ಯುದ್ಧನೌಕೆಗಳು ಮುಂತಾದುವುಗಳ ತಯಾರಿಕೆಯಲ್ಲಿ ಉಪಯೋಗಿ ಸುವ ಅತ್ಯುತ್ಕೃಷ್ಟವಾದ ಉಕ್ಕಿನ ತಯಾರಿಕೆಯಾಗುವುದು ಈ ವಿಧಾನದಿಂದ.
ಬೆಸ್ಸೆಮರ್ ವಿಧಾನದಲ್ಲಿ ತಾಂಡವಾಳದಲ್ಲಿರುವ ಇಂಗಾಲವನ್ನು ಪುರ್ತಿಯಾಗಿ ಉರಿಸಿ ಅನಂತರ ಆವಶ್ಯವಾದಷ್ಟು ಇಂಗಾಲವನ್ನು ಅದಕ್ಕೆ ಪುನಃ ಹಾಕುವರು. ತೆರೆದ ಒಲೆಯ ವಿಧಾನದಲ್ಲಿ ಲೋಹದಲ್ಲಿರುವ ಇಂಗಾಲದ ಪ್ರಮಾಣ ಆವಶ್ಯ ಪ್ರಮಾಣಕ್ಕೆ ಇಳಿಯುವಷ್ಟು ಮಾತ್ರ ಉರಿಸುವರು.

ವಿದ್ಯುತ್ಕುಲುಮೆಗಳು
ಇವು ಸ್ಥೂಲವಾಗಿ ತೆರೆದ ಕುಲುಮೆಯ ವಿಧಾನವನ್ನೇ ಹೋಲುತ್ತವೆ. ಆದರೆ ಇಲ್ಲಿ ಪರಿವರ್ತಕಗಳನ್ನೇ ವಿದ್ಯುಚ್ಛಕ್ತಿಯಿಂದ ಕಾಯಿಸುತ್ತಾರೆ. ಉತ್ಕರ್ಷಣಕ್ಕೆ ಆವಶ್ಯವಾದ ಆಮ್ಲಜನಕವನ್ನು ಹಿಮಟೈಟ್ ಒದಗಿಸುವುದು. ಬೇರೆ ಉರುವಲಿನ ಸಂಪರ್ಕಕ್ಕೆ ಪರಿವರ್ತಕಗಳು ಬಾರದಿರುವುದರಿಂದ ವಿದ್ಯುತ್ಕುಲುಮೆಯಲ್ಲಿ ತಯಾರಿಸಿದ ಉಕ್ಕು ಹೆಚ್ಚು ಉತ್ಕೃಷ್ಟವಾಗಿರುವುದು. 
ನಾಲ್ಕನೆಯ ವಿಧಾನ ಅದು ಮೂಸೆಯ ಉಕ್ಕು(ಕ್ರೂಸಿಬಲ್ ಸ್ಟೀಲ್). ಈ ವಿಧಾನದಿಂದ 1.5% ಭಾಗದಷ್ಟು ಇಂಗಾಲವಿರುವ ಅತ್ಯುತ್ಕೃಷ್ಟ ಉಕ್ಕನ್ನು ತಯಾರಿಸುವರು. ಮೆದು ಕಬ್ಬಿಣ ಮತ್ತ ಅವಶ್ಯ ಪ್ರಮಾಣದಲ್ಲಿ ಇಂಗಾಲ ಮತ್ತು ಇತರ ಲೋಹಗಳನ್ನು ಅಪೇಕ್ಷಿತ ಗುಣಗಳಿಗನುಸಾರವಾಗಿ ಹಾಕಿ ಇವೆಲ್ಲವನ್ನೂ ಕರಗಿಸುವುದು. ಕಬ್ಬಿಣ ಮತ್ತು ಇತರ ಲೋಹಗಳು ಕಬ್ಬಿಣದಲ್ಲಿ ವಿಲೀನಗೊಂಡು ಏಕರೂಪದ ಅತ್ಯುತ್ಕೃಷ್ಟವಾದ ಉಕ್ಕು ಉಂಟಾಗು ವುದು. ಇದನ್ನು ಅನೇಕ ವಿಶೇಷ ತರಹದ ಹತ್ಯಾರುಗಳು, ಸ್ಪ್ರಿಂಗುಗಳು, ಅರಗಳು, ರೇಜ಼ರ್ ಬ್ಲೇಡುಗಳು, ಚಾಕುಗಳು ಮುಂತಾದುವುಗಳ ತಯಾರಿಕೆಯಲ್ಲಿ ಉಪಯೋಗಿಸುವರು.
ಉಕ್ಕನ್ನು ಹದಮಾಡುವುದು: ಉಕ್ಕಿನ ಗುಣಗಳು ಅದರಲ್ಲಿ ಕಬ್ಬಿಣ ಯಾವ ಭೌತ ಸ್ಥಿತಿಯಲ್ಲಿದೆ ಮತ್ತು ಇಂಗಾಲ ಯಾವ ರೂಪದಲ್ಲಿದೆ ಎನ್ನುವುದನ್ನು ಅವಲಂಬಿಸಿವೆ. ಕಬ್ಬಿಣದ ಭೌತರೂಪಗಳು ಮುಖ್ಯವಾಗಿ ಎರಡು – ಕಬ್ಬಿಣ (ಅಥವಾ ಫೆರೈಟ್) ಮತ್ತು -ಕಬ್ಬಿಣ. ಕಬ್ಬಿಣದಲ್ಲಿ ಇಂಗಾಲ ಕಬ್ಬಿಣದ ಕಾರ್ಬೈಡಾದ ಸಿಮೆಂಟೈಟ್ (Fe3c) ರೂಪದಲ್ಲಿರಬಹುದು. 900 ಡಿಗ್ರಿ  ಸೆ. ವರೆಗಿನ ಉಷ್ಣತೆಯಲ್ಲಿ ಫೆರೈಟ್ ಸ್ಥಿರವಾಗಿ ಉಳಿದಿರುತ್ತದೆ. ಅದಕ್ಕಿಂತ ಮೇಲಿನ ಉಷ್ಣತೆಯಲ್ಲಿ -ಕಬ್ಬಿಣ ಸ್ಥಿರರೂಪ. -ಕಬ್ಬಿಣದಲ್ಲಿ ಇಂಗಾಲ ಅದ್ರಾವ್ಯ. ಹೀಗೆ ದ್ರಾವಣದಲ್ಲಿರುವ ಇಂಗಾಲ ಸಿಮೆಂಟೈಟ್ ತೂಪದಲ್ಲಿದೆ. 900 ಡಿಗ್ರಿ ಸೆ. ಮೀರಿದ ಉಷ್ಣತೆಯಲ್ಲಿ ವಿಲೀನವಾದ ಇಂಗಾಲವನ್ನೊಳಗೊಂಡ -ಕಬ್ಬಿಣವನ್ನು ಥಟ್ಟನೆ ಶೀತಲೀಕರಿಸಿದರೆ ಕಬ್ಬಿಣದ ರಚನೆಯಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಏಕೆಂದರೆ -ಕಬ್ಬಿಣ -ಕಬ್ಬಿಣವಾಗಿ ಪರಿವರ್ತನೆಯಾಗುವ ಕ್ರಿಯಾಗತಿ ಬಲು ನಿಧಾನ. ಆದ್ದರಿಂದ ಥಟ್ಟನೆ ಶೀತಲೀಕರಿಸಿದಾಗ ಕಬ್ಬಿಣ -ಕಬ್ಬಿಣಕ್ಕೆ ಪರಿವರ್ತಿತವಾಗುವುದಿಲ್ಲ. ಆದ್ದರಿಂದ ಕಬ್ಬಿಣ ಸಿಮೆಂಟೈಟ್ (Fe3c) ವಿಲೀನಗೊಂಡ -ಕಬ್ಬಿಣವಾಗಿರುವುದು. ಇಂಥ ಕಬ್ಬಿಣ ಅತಿ ಗಡಸು. ಇದರ ಬದಲು ಮೇಲಿನ ಉಷ್ಣತೆಯಲ್ಲಿರುವ ಇಂಗಾಲವಿಲೀನವಾದ ಕಬ್ಬಿಣವನ್ನು ನಿಧಾನವಾಗಿ ಶೀತಲೀಕರಿಸಿ ದರೆ -ಕಬ್ಬಿಣ -ಕಬ್ಬಿಣವಾಗುವುದು: ಮತ್ತು ಇಂಗಾಲ ಗ್ರಾಫೈಟ್ ರೂಪದಲ್ಲಿ ಕಬ್ಬಿಣದಿಂದ ಹೊರಬರುವುದು. ಇಂಥ ರಚನೆಯ ಕಬ್ಬಿಣ ಮೆದುವಾದುದು. ಥಟ್ಟನೆ ಶೀತಲೀಕರಿಸಿದ ಕಬ್ಬಿಣವನ್ನು 900 ಡಿಗ್ರಿ  ಸೆ. ಉಷ್ಣತೆಗಿಂತ ಮೇಲಿನ ಉಷ್ಣತೆಗೆ ಶೀತಲೀಕರಣ ವೇಗವನ್ನು ನಿಯಂತ್ರಿಸಿ ಯಾವ ಮಟ್ಟದ ಗಡಸನ್ನು ಬೇಕಾದರೂ ಪಡೆಯಬಹುದು. 
ಥಟ್ಟನೆ ಶೀತಲೀಕರಿಸಿದ ಉಕ್ಕನ್ನು 200ಲಿ-600ಡಿಗ್ರಿ  ಸೆ. ಒಳಗಿನ ಯಾವುದಾದರೊಂದು ನಿರ್ದಿಷ್ಟ ಉಷ್ಣತೆಯಲ್ಲಿ ಕೆಲವು ಕಾಲ ಇಟ್ಟರೆ -ಕಬ್ಬಿಣದಲ್ಲಿ ಸಿಮೆಂಟೈಟಿನ ವಿಲೀನದಿಂದ ಉಂಟಾದ ಘನ ದ್ರಾವಣದಿಂದ ಸಿಮೆಂಟೈಟ್ ಬೇರೆಯಾಗಿ ಸಿಮೆಂಟೈಟಿನ ಮತ್ತು ಕಬ್ಬಿಣದ ಸ್ಫಟಿಕಗಳು ಬೇರೆ ಬೇರೆಯಾಗುತ್ತವೆ. ಅಲ್ಲದೆ ಥಟ್ಟನೆ ಶೀತಲೀಕರಣದಲ್ಲಿ ಉಂಟಾದ ಸೆಳೆತಗಳು (ಸ್ಪ್ರೈನ್ಸ್‌) ಶಿಥಿಲಗೊಳ್ಳುವುವು. ಇವುಗಳಿಂದ ಕಬ್ಬಿಣದ ಗಡಸುತನ, ಬಿಗಿತ ಮತ್ತು ಸಾಮರ್ಥ್ಯಗಳಲ್ಲಿ ವ್ಯತ್ಯಾಸವುಂಟಾಗುವುದು. ಕಾಯಿಸುವ ಉಷ್ಣತೆಯ ಮಟ್ಟ ಮತ್ತು ಶೀತಲೀಕರಣ ವೇಗಗಳನ್ನು ನಿಯಂತ್ರಿಸಿ ಬಯಸುವ ಗಡುಸುತನ, ಬಿಗಿತ, ಸಾಮಥರ್ಯ್‌ವಿರುವ ಉಕ್ಕನ್ನು ಪಡೆಯಬಹುದು. ಉಕ್ಕು ಹದ ಮಾಡುವುದು ಎಂದು ಈ ಕ್ರಿಯೆಯ ಹೆಸರು. ಹೀಗೆ ಹದಮಾಡಿ ಅಪೇಕ್ಷಿತ ಗುಣಗಳಿರುವಂತೆ ಮಾಡುವ ಸಾಧ್ಯತೆಯೇ ಉಕ್ಕಿಗೆ ವಿಶೇಷ ಪ್ರಾಶಸ್ತ್ಯ ಬರಲು ಕಾರಣ.
ಮೇಲ್ಮೈ ಗಡುಸಾದ ಉಕ್ಕು: ರೈಲು ಗಾಲಿಯ ಅಚ್ಚುಗಳು (ಆಕ್ಸ್‌ಲ್ಸ್‌) ಮತ್ತು ವಾಹನಗಳ ಚಕ್ರಗಳು ಮುಂತಾದುವುಗಳ ತಯಾರಿಕೆಯಲ್ಲಿ ಉಪಯೋಗಿಸುವ ಉಕ್ಕಿನ ಹೊರಪಾರ್ಶ್ವ ಗಡುಸಾಗಿರಬೇಕು; ಸವೆತವನ್ನು ತಡೆಯುವಂತಿರಬೇಕು; ಒಳದಿಂಡು ಗಡುಸಾಗಿರದೆ ಹಠಾತ್ ಆಘಾತಗಳಿಂದ ಮುರಿಯದಂತೆ ಇರುವುದು ಅವಶ್ಯ. ಈ ರೀತಿಯಾಗಿ ಮೇಲ್ಮೈಯನ್ನು ಮಾತ್ರ ಹೆಚ್ಚು ಗಡುಸುಮಾಡಿ ಒಳಭಾಗ ಮೆದುವಾಗಿರುವಂತೆ ಮಾಡಲು ಅನೇಕ ವಿಧಾನಗಳನ್ನು ಉಪಯೋಗಿಸುವರು. ಇವುಗಳ ಪೈಕಿ ಒಂದು ವಿಧಾನ ಹೀಗಿದೆ: ಮೇಲ್ಮೈ ಗಡುಸು ಮಾಡಬೇಕಾದ ಉಕ್ಕಿನ ವಸ್ತುವನ್ನು ಪುಡಿ ಮಾಡಿದ ಇಂಗಾಲದಿಂದ ತುಂಬಿದ ಒಂದು ಕೋಶದೊಳಗಿಟ್ಟು ಕೆಲವು ದಿವಸಗಳವರೆಗೆ ಕಾಯಿಸಿದ ತರುವಾಯ ಹೊರಕ್ಕೆ ತೆಗೆದು ಎಣ್ಣೆಯಲ್ಲಿ ಅದ್ದಿ ಶೀತಲೀಕರಿಸುವರು. ಆಗ ಕಡಿಮೆ ಇಂಗಾಲವಿರುವ ಒಳದಿಂಡಿಗಿಂತ ಹೆಚ್ಚು ಇಂಗಾಲವಿರುವ ಹೊರಭಾಗ ಥಟ್ಟನೆ ಶೀತಲಗೊಂಡು ಹೆಚ್ಚು ಗಡುಸಾಗಿರುವುದಲ್ಲದೇ ಹೆಚ್ಚು ಆಘಾತವನ್ನೂ ತಡೆಯಬಲ್ಲದಾಗಿರುತ್ತದೆ.
ಉಕ್ಕಿನ ಲೋಹಮಿಶ್ರಣಗಳು: ಇವು ಕಬ್ಬಿಣ ಮತ್ತು ಇಂಗಾಲಗಳನ್ನಲ್ಲದೆ ಬೇರೆಯಾದ ಒಂದು ಅಥವಾ ಹೆಚ್ಚಿನ ಲೋಹಗಳನ್ನು ಒಳಗೊಂಡ ಉಕ್ಕುಗಳು. ಉಕ್ಕಿನ ಲೋಹಮಿಶ್ರಣಗಳ ತಯಾರಿಕೆಯಲ್ಲಿ ಉಪಯೋಗಿಸುವ ಇತರ ಲೋಹಗಳು ಉಕ್ಕಿನಲ್ಲಿ ನಾವು ಬಯಸುವ ಗುಣಗಳನ್ನು ಅವಲಂಬಿಸಿವೆ. ಟಂಗ್ಸ್ ಟನ್, ಮೊಲಿಬ್ಡಿನಂ, ಮ್ಯಾಂಗನೀಸ್, ಕ್ರೋಮಿಯಂ, ನಿಕ್ಕಲ್, ವೆನೇಡಿಯಂ ಮತ್ತು ಕೋಬಾಲ್ಟುಗಳು ಉಕ್ಕಿನ ಲೋಹಮಿಶ್ರಣಗಳ ತಯಾರಿಕೆಯಲ್ಲಿ ಉಪಯೋಗಿಸುವ ಇತರ ಲೋಹಗಳು. ಇಂಥ ಲೋಹಮಿಶ್ರಣಗಳ ಪೈಕಿ ಕೆಲವನ್ನು ಕೆಳಗೆ ವಿವರಿಸಿದೆ.

ಟಂಗ್ಸ್ ಟನ್ ಉಕ್ಕು 
ಇದನ್ನು ಅತಿ ವೇಗವಾಗಿ ಚಲಿಸುವ ಆಯುಧಗಳು, ಯಂತ್ರಗಳ ಭಾಗಗಳು ಇತ್ಯಾದಿಗಳ ತಯಾರಿಕೆಯಲ್ಲಿ ಉಪಯೋಗಿಸುವರು. ವೇಗವಾಗಿ ಚಲಿಸುವ ಆಯುಧಗಳ ಅಥವಾ ಯಂತ್ರ ಭಾಗಗಳ ಉಷ್ಣತೆ ಬಲುಬೇಗನೆ ಉನ್ನತಮಟ್ಟಕ್ಕೆ ಏರುವುದು. ಆಗ ಲೋಹ ಸಾಮಾನ್ಯವಾಗಿ ಮೆದುವಾಗುವುದು. ಇಂಥ ಲೋಹ ನಾವು ಉದ್ದೇಶಿಸಿದ ಕಾರ್ಯಕ್ಕೆ ಅನರ್ಹವಾಗುತ್ತದೆ. ಟಂಗ್ಸ್ಟನ್ ಉಕ್ಕಿನ ಗಡುಸುತನ ಉನ್ನತಮಟ್ಟದ ಉಷ್ಣತೆ ೧ಯಲ್ಲಿಯೂ ಕಡಿಮೆಯಾಗುವುದಿಲ್ಲ. ಆದ್ದರಿಂದ ಅದನ್ನು ಬೈರಿಗೆಗಳು (ಡ್ರಿಲ್ಸ್‌), ಲೇತ್ಗಳು, ಚಕ್ರಗಳ ಸನ್ನೆಕೋಲುಗಳು ಮುಂತಾದುವುಗಳ ತಯಾರಿಕೆಯಲ್ಲಿ ಉಪಯೋಗಿಸುವರು.

ಮೊಲಿಬ್ಡಿನಂ ಉಕ್ಕು
ಇದು ಬಲುಗಡುಸು ಮತ್ತು ಬಿಗಿ. ಇಂಥ ಉಕ್ಕನ್ನು ಬೈರಿಗೆಗಳಿಂದ ಕೊರೆಯಲಾಗುವುದಿಲ್ಲ. ಕೊಡತಿಯಿಂದ ಒಡೆಯಲಾಗುವುದಿಲ್ಲ. ಸುರಕ್ಷಿತ ಪೆಟ್ಟಿಗೆಗಳು, ನೆಲಮಾಳಿಗೆಗಳು, ಸುರಕ್ಷಿತ ಕೋಷ್ಠಗಳು ಮುಂತಾದುವುಗಳ ತಯಾರಿಕೆಯಲ್ಲಿ ಇದನ್ನು ಉಪಯೋಗಿಸುವರು.

ಮ್ಯಾಂಗನೀಸ್ ಉಕ್ಕು
ಇದಕ್ಕೆ ಹಠಾತ್ತನೆಯ ಆಘಾತವನ್ನು ತಡೆದುಕೊಳ್ಳುವ ಹೆಚ್ಚಿನ ಸಾಮಥರ್ಯ್‌ವಿದೆ. ರೈಲ್ವೆ ಪಾಯಿಂಟುಗಳಲ್ಲಿ ಅಂದರೆ ರೈಲ್ವೆ ರಸ್ತೆ ಕವಲು ಒಡೆಯುವ ಜಾಗಗಳಲ್ಲಿ ಇದರಿಂದ ಮಾಡಿದ ಕಂಬಿಗಳನ್ನು ಉಪಯೋಗಿಸುವರು.
ಕ್ರೋಂ ನಿಕ್ಕಲ್ ಉಕ್ಕು: ತುಕ್ಕು ಹಿಡಿಯದ ಉಕ್ಕಿನಲ್ಲಿ ಕ್ರೋಮಿಯಂ ಮತ್ತು ನಿಕ್ಕಲುಗಳು ಇರುವುವು. ಇದೇ ದಿನಬಳಕೆಯ ಸ್ಟೇನ್ಲೆಸ್ಸ್ಟೀಲ್. 18% ಕ್ರೋಮಿಯಂ ಮತ್ತು 8% ನಿಕ್ಕಲ್ ಇರುವ ಸ್ಟೇನ್ಲೆಸ್ ಸ್ಟೀಲನ್ನು ವಿಶೇಷವಾಗಿ ಮನೆಬಳಕೆಯ ಸಾಮಾನುಗಳ ತಯಾರಿಕೆಯಲ್ಲಿ ಉಪಯೋಗಿಸುವರು.

ವೆನೇಡಿಯಂ ಉಕ್ಕು
0.1%-0.2% ಭಾಗ ವೆನೇಡಿಯಂ ಇರುವ ಉಕ್ಕು ಬಹಳ ಬಿಗಿಯಾಗಿರುತ್ತದೆ ಮತ್ತು ಅದಕ್ಕೆ ಆಘಾತವನ್ನು ತಡೆಯುವ ಸಾಮಥರ್ಯ್‌ ಇದೆ. ಅಲ್ಲದೆ ಕುಲಕಾಟ ಮತ್ತು ಎತ್ತಿಹಾಕುವಿಕೆಗಳಿಂದ ಯಾವ ಪರಿಣಾಮವೂ ಇದರ ಮೇಲೆ ಆಗುವುದಿಲ್ಲ. ಆದ್ದರಿಂದ ಇದನ್ನು ಸ್ವಯಂಚಾಲಿತ ವಾಹನಗಳ ಚಕ್ರಗಳ ಸನ್ನೆಕೋಲುಗಳು ಮುಂತಾದುವುಗಳ ತಯಾರಿಕೆಯಲ್ಲಿ ವಿಶೇಷವಾಗಿ ಉಪಯೋಗಿಸುವರು.

ಕೋಬಾಲ್ಟ್‌ ಉಕ್ಕು
ಇದನ್ನು ವಿಶೇಷವಾಗಿ ಅಯಸ್ಕಾಂತಗಳ ತಯಾರಿಕೆಯಲ್ಲಿ ಉಪಯೋಗಿಸುವರು.
ಇದಿಷ್ಟು ಕಬ್ಬಿಣದ ಅದಿರು ವಿವಿಧ ಘಟ್ಟಗಳ ಮೂಲಕ ವಿವಿಧ ಉಕ್ಕುಗಳಾಗಿ ರೂಪಾಂತರಗೊಳ್ಳುವುದರ ಸ್ಥೂಲ ವಿವರಣೆ. ಮನುಷ್ಯಜೀವನದಲ್ಲಿ ಗಾಳಿ, ನೀರು, ಆಹಾರ, ವಸನ, ವಸತಿ ಆದ ಮೇಲೆ ಉಕ್ಕಿನದೇ ಮುಖ್ಯಸ್ಥಾನ.	(ಕೆ.ಎಸ್.ಬಿ,; ಆರ್.ಕೆ.ಎಸ್.)

ಭಾರತದಲ್ಲಿ ಉಕ್ಕು
ಆಧುನಿಕ ವಿಧಾನದಲ್ಲಿ ಇದರ ಉತ್ಪನ್ನದ ಮೊದಲ ಪ್ರಯತ್ನ ನಡೆದದ್ದು 1874ರಲ್ಲಿ, ಬರಾಕರ್ ಐರನ್ವಕ್ರ್ಸ್‌ ಕಂಪನಿಯಿಂದ; ಝಾರಿಯ ಕಲ್ಲಿದ್ದಲು ಗಣಿಗಳ ಸನಿಹದಲ್ಲಿ ಇದನ್ನು ಸ್ಥಾಪಿಸಿದರು. ಬೆಂಗಾಲ್ ಐರನ್ ಅಂಡ್ ಸ್ಟೀಲ್ ಕಂಪನಿ ಬರಾಕರ್ ಕಂಪನಿಯ ಸ್ವಾಮ್ಯವನ್ನು 1889ರಲ್ಲಿ ಪಡೆದುಕೊಂಡಿತು. 1900ರಲ್ಲಿ ಇಲ್ಲಿ ಉತ್ಪಾದಿಸಿದ ಉಕ್ಕು 35,500 ಮೆಟ್ರಿಕ್ ಟನ್ನುಗಳು, ಭಾರತದ ಉಕ್ಕಿನ ಉತ್ಪಾದನೆ 2010ರಲ್ಲಿ ಸು. 66.8 ಮಿಲಿಯನ್ ಟನ್ನುಗಳು. 

ಎರಡನೆಯ ಘಟ್ಟ ತಾತಾ ಕಂಪನಿಯ ಅಸ್ತಿತ್ವದಿಂದ ತೊಡಗುತ್ತದೆ. ತಾತಾ ಐರನ್ ಅಂಡ್ ಸ್ಟೀಲ್ ಕಂಪನಿಯನ್ನು ಜೆಮ್ಷಡ್ಜೀ ತಾತಾರವರು 1907ರಲ್ಲಿ ಬಿಹಾರಿನ ಸಾಕ್ಚಿ ಎಂಬಲ್ಲಿ ಸ್ಥಾಪಿಸಿದರು. ಇದರ ಮೊದಲ ತಯಾರಿಕೆ ತಾಂಡವಾಳ (1911), ತರುವಾಯ ಉಕ್ಕು (1912).

ಮುಂದಿನ ಘಟ್ಟಗಳಲ್ಲಿ ಬಂಗಾಳದ ಹಿರಾಪುರದ ಇಂಡಿಯನ್ ಐರನ್ ಅಂಡ್ ಸ್ಟೀಲ್ ಕಂಪನಿ (ಸ್ಥಾಪನೆ 1908) ಮತ್ತು ಮೈಸೂರು ರಾಜ್ಯದ ಭದ್ರಾವತಿಯ ಮೈಸೂರು ಸ್ಟೇಟ್ ಐರನ್ ವರ್ಕ್ಸ್‌ (ಸ್ಥಾಪನೆ 1923. ಈಗಿನ ಹೆಸರು ಮೈಸೂರು ಐರನ್ ಅಂಡ್ ಸ್ಟೀಲ್ ಲಿಮಿಟೆಡ್, 1962) ಇವನ್ನು ಹೆಸರಿಸಬೇಕು.

1939ರ ಸುಮಾರಿಗೆ ಭಾರತದಲ್ಲಿ ತಾಂಡವಾಳ ಮತ್ತು ಉಕ್ಕಿನ ವಾರ್ಷಿಕ ಉತ್ಪಾದನೆ ಕ್ರಮವಾಗಿ 18 ಲಕ್ಷ ಮೆ.ಟ. ಮತ್ತು 8 ಲಕ್ಷ ಮೆ.ಟ. ಆಗಿದ್ದುವು. ಯುದ್ಧೋದ್ಯಮಗಳ ತೀವ್ರ ಬೇಡಿಕೆಯಿಂದ ಉಕ್ಕಿನ ಉತ್ಪಾದನೆ ಬಹಳವಾಗಿ ಏರಲಾರಂಭಿಸಿತು. 1950ರಲ್ಲಿ ವಾರ್ಷಿಕ ಉತ್ಪಾದನೆ ತಾಂಡವಾಳ 15 ಲಕ್ಷ ಮೆ.ಟ. ಮತ್ತು ಉಕ್ಕು 15 ಲಕ್ಷ ಮೆ.ಟ. ಮಟ್ಟವನ್ನು ಮೀರಿತು. ಪಂಚವಾರ್ಷಿಕ ಯೋಜನೆಗಳಲ್ಲಿ (ಮುಖ್ಯವಾಗಿ ಎರಡನೆಯದರಲ್ಲಿ) ಉಕ್ಕಿನ ಉತ್ಪಾದನೆಗೆ ವಿಶೇಷ ಗಮನ ನೀಡಲಾಗಿದೆ. ಒರಿಸ್ಸದ ರೂರ್ಕೆಲ (ಜರ್ಮನ್ ತಾಂತ್ರಿಕ ಸಹಕಾರ), ಮಧ್ಯಪ್ರದೇಶದ ಭಿಲೈ (ರಷ್ಯನ್ ತಾಂತ್ರಿಕ ಸಹಕಾರ) ಮತ್ತು ಮಶ್ಚಿಮ ಬಂಗಾಳದ ದುರ್ಗಾಪುರ (ಬ್ರಿಟಿಷ್ ತಾಂತ್ರಿಕ ಸಹಕಾರ) ಈ ಮೂರು ಸ್ಥಳಗಳಲ್ಲಿ ಸರ್ಕಾರೀ ಕ್ಷೇತ್ರದಲ್ಲಿ ಸ್ಥಾಪಿಸಿರುವ ಕಾರ್ಖಾನೆಗಳನ್ನು ಇಲ್ಲಿ ಹೆಸರಿಸಬಹುದು. ಈ ನೂತನ ಸ್ಥಾಪನೆಗಳ ಜೊತೆಯಲ್ಲೇ ಹಳೆಯ ಕಾರ್ಖಾನೆಗಳ ಉತ್ಪಾದನಾಸಾಮರ್ಥ್ಯವನ್ನು ಹೆಚ್ಚಿಸಲಾಯಿತು.  ಕರ್ನಾಟಕ ರಾಜ್ಯದ ಹೊಸಪೇಟೆ-ಇಲ್ಲಿ 2010ರಲ್ಲಿ ಜಗತ್ತಿನ ಉಕ್ಕಿನ ಉತ್ಪಾದನೆ 1,413.6 ಮಿಲಿಯನ್ ಮೆಟ್ರಿಕ್ ಟನ್ನುಗಳು. ಇಂದು ಪ್ರಪಂಚದ ಒಟ್ಟು ಉಕ್ಕಿನ ಉತ್ಪಾದನೆಯ ಶೇ. 44ರಷ್ಟನ್ನು ಚೀನ ಉತ್ಪಾದಿಸುತ್ತದೆ.	

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ